ಸರ್ಕಾರಿ ನೌಕರರ ಕೈಗೆಟುಕದ ಯೋಜನೆ | ಆಸ್ಪತ್ರೆಗಳಿಂದ ಬೇಕಾಬಿಟ್ಟಿ ಸುಲಿಗೆ
ವಿಲಾಸ ಮೇಲಗಿರಿ, ಬೆಂಗಳೂರು ಸರ್ಕಾರಿ ನೌಕರರಿಗೆ ನಗದು ರಹಿತ ಶಸಚಿಕಿತ್ಸೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ‘ಜ್ಯೋತಿ ಸಂಜೀವಿನಿ’ಯೋಜನೆ ರೋಗಿಗಳ ಬದಲಾಗಿ ಸುಲಿಗೆ ಮಾಡುವ ಆಸ್ಪತ್ರೆಗಳ ಪಾಲಿಗೆ ಸಂಜೀವಿನಿಯಾಗಿದೆ! ಹೃದ್ರೋಗ, ಕ್ಯಾನ್ಸರ್, ನ್ಯೂರಾಲಜಿ, ಪಾಲಿಟ್ರಾಮಾ (ಅಪಘಾತ), ನವಜಾತ ಶಿಶು ಮತ್ತು ಮಕ್ಕಳು, ಯುರಾಲಜಿ, ಸುಟ್ಟಗಾಯಗಳಿಗೆ ಸಂಬಂಧಿಸಿದ 567 ಶಸಚಿಕಿತ್ಸೆಗಳು ಸೇರಿದ್ದರೂ ಈ ಯೋಜನೆಯಡಿ ನೌಕರರಿಗೆ ಸರಿಯಾದ ಚಿಕಿತ್ಸೆ ದೊರೆಯದೆ ಅನ್ಯಾಯವಾಗುತ್ತಿದೆ ಎಂಬ ಅಳಲು ವ್ಯಕ್ತವಾಗಿದೆ.
ಏನೇನು ಸೌಲಭ್ಯ?: ಯೋಜನೆಯಲ್ಲಿ ಗುರುತಿಸಿರುವ ಕಾಯಿಲೆಗಳ ಚಿಕಿತ್ಸೆಗೆ ವೈದ್ಯಕೀಯ ವೆಚ್ಚ ಮರುಪಾವತಿಗೆ ಅವಕಾಶವಿಲ್ಲ. ವೆಚ್ಚವನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಭರಿಸುತ್ತದೆ. ವಾಜಪೇಯಿ ಆರೋಗ್ಯಶ್ರೀ ಯೋಜನೆಯನ್ನು ಇದೇ ಸಂಸ್ಥೆ ನಿರ್ವಹಿಸುತ್ತಿದ್ದು, ಅರ್ಹ ಬಿಪಿಎಲ ಪಡಿತರ ಚೀಟಿದಾರರಿಗೆ ಉಚಿತವಾಗಿ ಅನುಮೋದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಹಾಗಾಗಿ ಸರ್ಕಾರಿ ನೌಕರರು ಮತ್ತು ಬಿಪಿಎಲ ಪಡಿತರ ಚೀಟಿದಾರರಿಗೆ ನೀಡುವ ಚಿಕಿತ್ಸಾ ವೆಚ್ಚ ಎರಡೂ ಒಂದೇ ಆಗಿವೆ. ವ್ಯತ್ಯಾಸ ವೆಂದರೆ, ನೌಕರರ ಮೂಲ ವೇತನಕ್ಕೆ ಅನುಗುಣವಾಗಿ ಜನರಲ್, ಸೆಮಿ ಪ್ರೈವೇಟ್, ಸ್ಪೆಷಲ್ ವಾರ್ಡ್ಗಳ ಸೌಲಭ್ಯ ಪಡೆಯಬಹುದಷ್ಟೆ.
ನೌಕರರು ಜ್ಯೋತಿ ಸಂಜೀವಿನಿ ಯೋಜನೆ ನಿಯಮಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳ ಆಮಿಷಕ್ಕೆ ಒಳಗಾಗದೆ ತಮ್ಮ ಹಕ್ಕು ಪಡೆಯಬೇಕು.
| ಡಾ. ಬೋರೇಗೌಡ ಕಾರ್ಯಕಾರಿ ನಿರ್ದೇಶಕ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್
ರೋಗಿಗಳಿಗೆ ತಿಳಿವಳಿಕೆ ಇಲ್ಲ
ನೌಕರ ಹೃದಯಾಘಾತಕ್ಕೀಡಾದರೆ ರೋಗ ಪತ್ತೆ, ತುರ್ತು ಚಿಕಿತ್ಸೆ ಮತ್ತು ಆಂಜಿಯೋಗ್ರಾಮ್ ವೆಚ್ಚ ಸುಮಾರು 20 ಸಾವಿರ ರೂ. ಅನ್ನು ತನ್ನ ಕೈಯಿಂದಲೇ ಭರಿಸಬೇಕು. ಚಿಕಿತ್ಸೆ ತರುವಾಯ ಇದನ್ನು ಮರುಪಾವತಿ ಮಾಡಿಕೊಳ್ಳಬಹುದು. ಆದರೆ ಆಸ್ಪತ್ರೆಗಳು ರೋಗಿಗಳಿಗೆ ಇದನ್ನು ತಿಳಿಸುತ್ತಿಲ್ಲ. ರೋಗಿಗಳೂ ಈ ಬಗ್ಗೆ ತಿಳಿವಳಿಕೆ ಹೊಂದಿಲ್ಲ. ಹಾಗಾಗಿ ಖರ್ಚು ಮಾಡಿದ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ.
ಆನ್‌ಲೈನ್ ನೋಂದಣಿ: ಶಸ್ತ್ರಚಿಕಿತ್ಸೆ ಅವಶ್ಯವಾದಲ್ಲಿ ರೋಗಿ ಆಸ್ಪತ್ರೆಗೆ ದಾಖಲಾಗಿ ‘ಆರೋಗ್ಯ ಮಿತ್ರ’ರ ನೆರವಿನೊಂದಿಗೆ ಎಲ್ಲ ದಾಖಲೆಗಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಆನ್‌ಲೈನ್ ಮೂಲಕ ಮಂಜೂರಾತಿಗೆ ಕಳುಹಿಸಬೇಕು. ಅದಾದ ಒಂದೆರಡು ದಿನಗಳಲ್ಲಿ ಟ್ರಸ್ಟ್ ಶಸಚಿಕಿತ್ಸೆ ಹಾಗೂ ಸ್ಟಂಟ್ ವೆಚ್ಚ ಸೇರಿ 95 ಸಾವಿರ ರೂ. ಮಂಜೂರು ಮಾಡುತ್ತದೆ.
ಸ್ಟಂಟ್ ಹೆಸರಿನಲ್ಲಿ ಸ್ಟಂಟ್: ನೆಟ್‌ವರ್ಕ್ ಆಸ್ಪತ್ರೆಗಳು ಟ್ರಸ್ಟ್ ನಿಗದಿಪಡಿಸಿರುವ ಸ್ಟಂಟ್ ಉತ್ತಮ ದರ್ಜೆಯದ್ದಾಗಿರುವುದಿಲ್ಲ ಎಂದು ಹೆದರಿಕೆ ಹುಟ್ಟಿಸಿ ವಿದೇಶದಿಂದ ತರಿಸಿದ ಗುಣಮಟ್ಟದ ಸ್ಟಂಟ್ ಅಳವಡಿಸುವುದಾಗಿ ಹೆಚ್ಚುವರಿಯಾಗಿ 35-40 ಸಾವಿರ ರೂ. ಭರಿಸಲು ಸೂಚಿಸುತ್ತಾರೆ. ಆಗ ನೌಕರರು ಅನಿವಾರ್ಯವಾಗಿ ಮೋಸಕ್ಕೆ ಒಳಗಾಗುತ್ತಾರೆ.
ಔಷಧ ವೆಚ್ಚಕ್ಕೂ ಕತ್ತರಿ: ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಔಷಧ ವೆಚ್ಚವನ್ನು ನೌಕರರು ತಮ್ಮ ಸಂಬಳದಿಂದ ಭರಿಸಬೇಕು. ಹಾಗಾಗಿ ಸರ್ಕಾರದಿಂದ ಈ ಮೊದಲು ದೊರೆಯುತ್ತಿದ್ದ ವೈದ್ಯಕೀಯ ವೆಚ್ಚ ಮರುಪಾವತಿ ಯೋಜನೆಯೇ ಉತ್ತಮವಾಗಿದೆ ಎಂದು ನೌಕರರನೇಕರು ಅಭಿಪ್ರಾಯಪಡುತ್ತಾರೆ.
ದೂರುಗಳಿಗೆ ಸಂಪರ್ಕಿಸಿ
ದೂರುಗಳಿಗಾಗಿ ಆಸ್ಪತ್ರೆ ಹಂತದಲ್ಲಿ ಆರೋಗ್ಯ ಮಿತ್ರರು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕೋ-ಆರ್ಡಿನೇಟರ್, ತರುವಾಯ ರೀಜನಲ್ ಮೆಡಿಕಲ್ ಕನ್ಸಲ್ಟಂಟ್ ಗಮನಕ್ಕೆ ತರಬಹುದು ಅಥವಾ ಕಾಲ್‌ಸೆಂಟರ್ ನಂ- 1800 4258330. ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಬೆಂಗಳೂರು ಇವರಿಗೂ ಲಿಖಿತ ದೂರು ನೀಡಬಹುದು.
ದೂರುಗಳಿಗೆ ಸಂಪರ್ಕಿಸಿ
ದೂರುಗಳಿಗಾಗಿ ಆಸ್ಪತ್ರೆ ಹಂತದಲ್ಲಿ ಆರೋಗ್ಯ ಮಿತ್ರರು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕೋ-ಆರ್ಡಿನೇಟರ್, ತರುವಾಯ ರೀಜನಲ್ ಮೆಡಿಕಲ್ ಕನ್ಸಲ್ಟಂಟ್ ಗಮನಕ್ಕೆ ತರಬಹುದು ಅಥವಾ ಕಾಲ್‌ಸೆಂಟರ್ ನಂ- 1800 4258330. ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಬೆಂಗಳೂರು ಇವರಿಗೂ ಲಿಖಿತ ದೂರು ನೀಡಬಹುದು.