ಕರಡು ಸಿದ್ಧ: ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ ಇದ್ದ ವಿಶೇಷ ವಿನಾಯಿತಿ ರದ್ದು
ಶಿಕ್ಷಕರ ವರ್ಗ: ನಿಯಮ ಸರಳ
ಪ್ರಜಾವಾಣಿ ವಾರ್ತೆ
50 ವರ್ಷ ಮೇಲ್ಪಟ್ಟ ಶಿಕ್ಷಕಿಯರು, 55 ವರ್ಷ ತುಂಬಿದ ಶಿಕ್ಷಕರಿಗೆ ಹಾಗೂ ಈಗಾಗಲೇ ‘ಸಿ’ ವಲಯದಲ್ಲಿ 10 ವರ್ಷ ಕಾರ್ಯನಿರ್ವಹಿಸಿದವರಿಗೆ ವಲಯ ವರ್ಗಾವಣೆಯಿಂದ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಮಾಲೋಚನಾ ಸಭೆಯಲ್ಲಿ ಇಲಾಖೆ ಸಿದ್ಧಪಡಿಸಿರುವ ಕರಡಿನ ಕುರಿತು ವಿವರವಾಗಿ ಚರ್ಚಿಸಲಾಯಿತು. ಸರ್ಕಾರಿ ನೌಕರರ ಸಂಘ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢಶಾಲಾ ಶಿಕ್ಷಕರ ಸಂಘಗಳ ಪದಾಧಿಕಾರಿಗಳೂ ಇದ್ದರು. ಬಹುತೇಕ ಮಂದಿ ಕರಡು ನಿರ್ಣಯಕ್ಕೆ ಮೆಚ್ಚುಗೆ ಸೂಚಿಸಿದರು. ವಿಧಾನ ಪರಿಷತ್ ಸದಸ್ಯರ ಸಲಹೆ ಪಡೆದ ಬಳಿಕ ಇದನ್ನು ಸಚಿವ ಸಂಪುಟದ ಮುಂದೆ ತರಲಾಗುತ್ತದೆ.
ಇದುವರೆಗೆ ಶಿಕ್ಷಕರ ಸಂಘ ಹಾಗೂ ಸರ್ಕಾರಿ ನೌಕರರ ಸಂಘಗಳ ಪದಾಧಿಕಾರಿಗಳು ವಲಯ ವರ್ಗಾವಣೆಯಿಂದ ವಿನಾಯಿತಿ ಪಡೆಯುತ್ತಿದ್ದರು. ಈ ಕರಡು ನಿಯಮದಲ್ಲಿ ಅದನ್ನು ತೆಗೆದು ಹಾಕಲಾಗಿದೆ. ಪತಿ–ಪತ್ನಿ ಪ್ರಕರಣದಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವವರಿಗೆ ಮಾತ್ರ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ (ಸಿಆರ್ಪಿ), ಬ್ಲಾಕ್ ಸಂಪನ್ಮೂಲ ವ್ಯಕ್ತಿಗಳು (ಬಿಆರ್ಪಿ) ಕನಿಷ್ಠ ಅಥವಾ ಗರಿಷ್ಠ ಅವಧಿ ಪೂರ್ಣಗೊಳಿಸಿದ ನಂತರ ಶಾಲೆಗಳಿಗೆ ಮರು ಸ್ಥಳ ನಿಯುಕ್ತಿಗೊಳಿಸುವಾಗ ಶೇ 20ಕ್ಕಿಂತ ಹೆಚ್ಚು ಖಾಲಿ ಇರುವ ತಾಲ್ಲೂಕುಗಳಿಗೆ ಆದ್ಯತೆಯ ಮೇರೆಗೆ ವರ್ಗಾಯಿಸಬೇಕೆಂಬ ನಿಯಮ ಸಡಿಲಿಸಿ, ತಾಲ್ಲೂಕು ಅಥವಾ ಜಿಲ್ಲೆಯ ಯಾವುದೇ ಹುದ್ದೆಗೆ ಕೌನ್ಸೆಲಿಂಗ್ ಮೂಲಕ ವರ್ಗಾಯಿಸಲಾಗುತ್ತದೆ. ಶಿಕ್ಷಕರ ಕುಂದು–ಕೊರತೆಗಳನ್ನು ಪರಿಹರಿಸಲು ವಿಭಾಗೀಯ ನಿರ್ದೇಶಕರನ್ನು ನಿಯೋಜಿಸಲಾಗುತ್ತದೆ.
ಹೆಚ್ಚುವರಿ ಶಿಕ್ಷಕರನ್ನು ಅಗತ್ಯವಿರುವ ಶಾಲೆಗಳಿಗೆ ಮರುನಿಯುಕ್ತಿಗೊಳಿಸುವಾಗ ಮೊದಲು ತಾಲ್ಲೂಕು ಹಾಗೂ ಬಳಿಕ ಜಿಲ್ಲಾ ಹಂತಕ್ಕೆ ಸೀಮಿತಗೊಳಿಸುವುದು. ವಿನಾಯಿತಿ, ಆದ್ಯತೆ ಪ್ರಕರಣಗಳಲ್ಲಿ ಏಕ ನೀತಿಯನ್ನು ತರಲು ಪ್ರಸ್ತಾಪಿಸಲಾಗಿದೆ.