ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಲು ರಾಷ್ಟ್ರಪತಿಗೆ ವರದಿ l ವಿಭಾಗೀಯ ಪೀಠದಲ್ಲಿದ್ದ ನ್ಯಾಯಮೂರ್ತಿಗಳ ಇಂಗಿತ
ವರ್ಗಾವಣೆ ದಂಧೆ: ಹೈಕೋರ್ಟ್ ಕೆಂಡಾಮಂಡಲ
ನ್ಯಾಯಮೂರ್ತಿ ಎಚ್.ಜಿ.ರಮೇಶ್
ಪ್ರಜಾವಾಣಿ ವಾರ್ತೆ
ಬೆಂಗಳೂರು: ‘ರಾಜ್ಯ ಸರ್ಕಾರ ಅಧಿಕಾರಿಗಳ ವರ್ಗಾವಣೆಯನ್ನು ದೊಡ್ಡ ದಂಧೆಯನ್ನಾಗಿ ಮಾಡಿಕೊಂಡಿದೆ’ ಎಂದು ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
‘ಈ ವಿಷಯವನ್ನು ನಾವು ರಾಜ್ಯಪಾಲರ ಗಮನಕ್ಕೆ ತರುತ್ತೇವೆ. ಅದರ ಪ್ರಕಾರ ರಾಜ್ಯಪಾಲರು, ವರ್ಗಾವಣೆ ಕುರಿತ ಸಮಗ್ರ ವರದಿ ಕಲೆ ಹಾಕಿ ರಾಷ್ಟ್ರಪತಿಗಳಿಗೆ ಕಳುಹಿಸಬೇಕು. ರಾಷ್ಟ್ರಪತಿ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬೇಕು’ ಎಂಬ ಇಂಗಿತ ವ್ಯಕ್ತಪಡಿಸಿದೆ.
2018-19ನೇ ಸಾಲಿನ ವಲಯ ಅರಣ್ಯಾಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದ ಅರ್ಜಿಯೊಂದನ್ನು ನ್ಯಾಯಮೂರ್ತಿ ಎಚ್.ಜಿ. ರಮೇಶ್ ಹಾಗೂ ನ್ಯಾಯಮೂರ್ತಿ ಅಶೋಕ್ ಜಿ. ನಿಜಗಣ್ಣವರ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ಕೆ.ನಾಗೇಂದ್ರ ಕುಮಾರ್, ‘ಅರ್ಜಿದಾರ ಈರಣ್ಣ ಯಾದಗಿರಿಯ ವಲಯ ಅರಣ್ಯಾಧಿಕಾರಿಯಾಗಿದ್ದು, ಇವರ ಸ್ಥಾನಕ್ಕೆ ಮತ್ತೊಬ್ಬರನ್ನು ವರ್ಗಾವಣೆ ಮಾಡಲಾಗಿದೆ. ಆದರೆ, ಈರಣ್ಣ ಅವರಿಗೆ ಜಾಗವನ್ನೇ ತೋರಿಸಿಲ್ಲ’ ಎಂದು ಆಕ್ಷೇಪಿಸಿದರು.
ಈ ಮಾತಿಗೆ ಕುದ್ದು ಹೋದ ನ್ಯಾಯಮೂರ್ತಿ ರಮೇಶ್, ‘ರಾಜ್ಯ ಸರ್ಕಾರದಲ್ಲಿ ಯಡ್ಡಾದಿಡ್ಡಿ ಹಾಗೂ ಕಾನೂನು ಬಾಹಿರ ವರ್ಗಾವಣೆ ಸುಗ್ಗಿಯಾಗಿ ಪರಿಣಮಿಸಿದೆ. ಈ ಸರ್ಕಾರಕ್ಕೆ ಹೇಳೋರು ಕೇಳೋರೇ ಇಲ್ಲದಂತಾಗಿದೆ’ ಎಂದು ಸರ್ಕಾರಿ ವಕೀಲರನ್ನು ತರಾಟೆಗೆ ತೆಗೆದುಕೊಂಡರು.
‘ಸರ್ಕಾರದ ಕಾರ್ಯ
ದರ್ಶಿಗಳು ವರ್ಗಾವಣೆಯನ್ನೇ ಒಂದು ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ನಿಯಂತ್ರಣವಿಲ್ಲದ ಇಂತಹ
ವ್ಯವಹಾರಗಳಿಂದ ಅಧಿಕಾರಿಗಳು, ಮಂತ್ರಿಗಳು ಹುದ್ದೆಗಳನ್ನು ಹರಾಜಿಗಿಟ್ಟಿದ್ದಾರೆ’ ಎಂದು ಕಿಡಿ ಕಾರಿದರು.
‘ಹೈಕೋರ್ಟ್‌ಗಂತೂ ಈ ವಿಷಯದಲ್ಲಿ ಎಚ್ಚರಿಸಿ, ಎಚ್ಚರಿಸಿ ಸುಸ್ತಾಗಿ ಹೋಗಿದೆ. ಇನ್ನು ಮುಂದೆ ಇದನ್ನು ಸಹಿಸಲು ಸಾಧ್ಯವಿಲ್ಲ. ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಇರುವ ಎಲ್ಲ ನಿಯಮಾವಳಿಗಳನ್ನು ಪರಿಶೀಲಿಸಲು ರಾಜ್ಯಪಾಲರಿಗೆ
ನಿರ್ದೇಶಿಸಲಾಗುವುದು’ ಎಂದರು.
ವರ್ಗಾವಣೆ ಆದೇಶಕ್ಕೆ ಮಧ್ಯಂತರ ತಡೆ ನೀಡಿರುವ ನ್ಯಾಯಪೀಠ,
ಪ್ರತಿವಾದಿಗಳಾದ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಈರಣ್ಣ ಅವರ ಜಾಗಕ್ಕೆ ವರ್ಗಾವಣೆ
ಗೊಂಡಿರುವ ಹುಮನಾಬಾದ್ ಅರಣ್ಯ ವಲಯಾಧಿಕಾರಿ ಬಸವರಾಜ ಎಸ್.ಡಾಂಗೆ ಅವರಿಗೆ ನೋಟಿಸ್ ಜಾರಿಗೊಳಿಸುವಂತೆ ಆದೇಶಿಸಿದೆ. ಪ್ರಕರದ ವಿಚಾರಣೆಯನ್ನು ಮುಂದೂಡಲಾಗಿದೆ.
‘ಕಾನೂನುಬಾಹಿರ ಚಟುವಟಿಕೆಗೆ ಪ್ರಸಿದ್ಧಿಯಾಗುತ್ತಿರುವ ಸರ್ಕಾರ ’
ಅರ್ಜಿದಾರರ ಅಕ್ಷೇಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಯಾರ್‍ರಿ ಅದು ಮಂತ್ರಿ’ ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿದರು.
‘ಈ ಅಧಿಕಾರಿಗಳಿಗೆ ಕೇವಲ ಮನವಿಗಳನ್ನು ಸ್ವೀಕರಿಸುವುದೊಂದೇ ಗೊತ್ತು. ಕೆಲಸ ಏನು ಮಾಡಬೇಕು ಎಂಬುದೇ ಗೊತ್ತಿಲ್ಲ’ ಎಂದು ಹರಿಹಾಯ್ದರು.‘ಸರ್ಕಾರಕ್ಕೆ ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ. ಕೋರ್ಟ್‌ಗೆ ಬರುವ ವರ್ಗಾವಣೆಗೆ ಸಂಬಂಧಿಸಿದ ಪ್ರತಿ ಹತ್ತು ಕೇಸ್‌ಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳ ದಂಧೆಯೇ ಢಾಳಾಗಿ ಕಾಣುತ್ತಿದೆ. ಮಂತ್ರಿಗಳಿಗೆ ಸರ್ಕಾರಕ್ಕೆ ಲಂಗುಲಗಾಮು ಇಲ್ಲದಂತಾಗಿದೆ. ಏನೇ ಆಗಬೇಕಾದರೂ ಅದು ಹೈಕೋರ್ಟ್ ಆದೇಶದ ಮೂಲಕವೇ ನಡೆಯಬೇಕಾದ ದುಃಸ್ಥಿತಿ ಬಂದೊದಗಿದೆ‘ ಎಂದು ಬೇಸರ ಹೊರಹಾಕಿದರು.
ಅಧಿಕಾರಿಗಳು ಕೆಲಸ ಮಾಡದೆ ಖಾಲಿ ಕುಳಿತುಕೊಂಡು ಸಂಬಳ ತಿನ್ನುವ ಪರಿಸ್ಥಿತಿ ತಲೆದೋರಿದೆ. ಈ ನಡವಳಿಕೆಗೆ ರಾಜ್ಯ ಸರ್ಕಾರ ಪ್ರಸಿದ್ಧಿ ಹೊಂದುತ್ತಿದೆ ಎಚ್.ಜಿ.ರಮೇಶ್, ನ್ಯಾಯಮೂರ್ತಿ