ಹಿಂಬಡ್ತಿ– ಮುಂಬಡ್ತಿ: ಸುಪ್ರೀಂ ಬಳಿ ‘ಕತ್ತಿ’
ಬೆಂಗಳೂರು: ಹಿಂಬಡ್ತಿ ಭೀತಿಯಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ನೌಕರರ ರಕ್ಷಣೆಗೆ ರಾಜ್ಯ ಸರ್ಕಾರ ಕಾಯ್ದೆ ಜಾರಿಗೊಳಿಸಿದ್ದರೂ, ಆತಂಕ ಇನ್ನೂ ನಿವಾರಣೆಯಾಗಿಲ್ಲ. ಸುಪ್ರೀಂ ಕೋರ್ಟ್ ನೀಡುವ ‘ನಿರ್ದೇಶನ’ ಕಾಯ್ದೆಯ ಭವಿಷ್ಯವನ್ನು ನಿರ್ಧರಿಸಲಿದೆ.
ರಾಜ್ಯ ಸರ್ಕಾರದ ‘ಬಡ್ತಿ ಮೀಸಲು ಕಾಯ್ದೆ–2002’ ಅನ್ನು ರದ್ದುಪಡಿಸಿ 2017ರ ಫೆ. 9ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ತೀರ್ಪು ಪಾಲನೆ ಆಗಿಲ್ಲ ಎಂದು ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿ ಇದೇ 4ರಂದು ವಿಚಾರಣೆಗೆ ಬರಲಿದೆ.
ಕಾಯ್ದೆ ಜಾರಿಯಾದ ಬಳಿಕ ನೌಕರರ ಹಿಂಬಡ್ತಿ–ಮುಂಬಡ್ತಿ ಪ್ರಕ್ರಿಯೆಯನ್ನು ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಆದರೆ, ಈ ವಿಷಯಲ್ಲಿ ಮುಂದೇನು ಎಂದು ದಿಕ್ಕು ತೋಚದ ಸರ್ಕಾರ, ಕೋರ್ಟ್ ನೀಡುವ ತೀರ್ಮಾನವನ್ನು ಎದುರು ನೋಡುತ್ತಿದೆ. ಹೀಗಾಗಿ, ಹಿಂಬಡ್ತಿಯ ಭೀತಿ ಹಾಗೂ ಮುಂಬಡ್ತಿಯ ನಿರೀಕ್ಷೆಯಲ್ಲಿರುವ ಎಂಟು ಸಾವಿರಕ್ಕೂ ಹೆಚ್ಚು ನೌಕರರ ಚಿತ್ತ ಕೋರ್ಟ್‌ನತ್ತ ನೆಟ್ಟಿದೆ.
ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ: ಈ ಬಗ್ಗೆ, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ (ಈಗ ಮುಖ್ಯ ಕಾರ್ಯದರ್ಶಿ) ಸುಪ್ರೀಂ ಕೋರ್ಟ್‌ಗೆ ಶುಕ್ರವಾರ (ಜೂನ್ 29) ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
‘ಕೋರ್ಟ್ ತೀರ್ಪು ಅನುಷ್ಠಾನದಿಂದ ಹಿಂಬಡ್ತಿ ಆತಂಕ ಎದುರಿಸುತ್ತಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಹಿತರಕ್ಷಣೆಗಾಗಿ ರೂಪಿಸಿದ್ದ ಮಸೂದೆಗೆ ರಾಷ್ಟ್ರಪತಿ ಇತ್ತೀಚೆಗೆ ಅಂಕಿತ ಹಾಕಿದ್ದಾರೆ. ಅದರ ಬೆನ್ನಲ್ಲೆ, ಈ ಕಾಯ್ದೆ ಅನುಷ್ಠಾನಕ್ಕೆ ಒತ್ತಾಯಿಸಿರುವ ಪರಿಶಿಷ್ಟ ವರ್ಗಕ್ಕೆ ಸೇರಿದ ನೌಕರರ ಸಂಘಟನೆಗಳು, ತೀರ್ಪು ಅನುಷ್ಠಾನದ ಪರಿಣಾಮ ಹಿಂಬಡ್ತಿಗೆ ಒಳಗಾಗಿರುವ ನೌಕರರನ್ನು ಮತ್ತೆ ಅದೇ ಜಾಗದಲ್ಲಿ ಮುಂದುವರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಈ ಕಾರಣದಿಂದ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಪ್ರಮಾಣದ ಪತ್ರದಲ್ಲಿ ತಿಳಿಸಲಾಗಿದೆ.
ಕೋರ್ಟ್ ತೀರ್ಪು ಪಾಲಿಸುವ ನಿಟ್ಟಿನಲ್ಲಿ ಜೂನ್ ಅಂತ್ಯದವರೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
‘ಅಹಿಂಸಾ’ ವಾದ: ‘ತೀರ್ಪಿಗೆ ತದ್ವಿರುದ್ಧವಾಗಿ ರಾಜ್ಯ ಸರ್ಕಾರ ಹೊಸ ಕಾಯ್ದೆ ರಚಿಸಿದ್ದು, ಅದಕ್ಕೆ ತಡೆಯಾಜ್ಞೆ ನೀಡಬೇಕು’ ಎಂದು ಕೋರಿ ‘ಅಹಿಂಸಾ’ (ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ ವರ್ಗದ ನೌಕರರ) ಒಕ್ಕೂಟ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
‘ಪ್ರತಿವಾದಿಗಳ (ರಾಜ್ಯ ಸರ್ಕಾರ ಮತ್ತು ಎಸ್‌ಟಿ, ಎಸ್‌ಟಿ ನೌಕರರು) ವಾದವನ್ನು ಆಲಿಸಿದ ಬಳಿಕ ನೀಡಿರುವ ತೀರ್ಪನ್ನು ಎಲ್ಲರೂ ಅಂತಿಮ ಎಂದು ಪರಿಗಣಿಸಬೇಕು. ಆದರೆ ರಾಜ್ಯ ಸರ್ಕಾರ, ಆ ಆದೇಶವನ್ನು ಧಿಕ್ಕರಿಸಿ ಕಾಯ್ದೆ ರೂಪಿಸಿದೆ. ಅಲ್ಲದೆ, ಕಾಯ್ದೆಯ ಕಲಂ 9ರ ಪ್ರಕಾರ, ಅದರಲ್ಲಿರುವ ಯಾವುದೇ ಅಂಶಗಳ ಬಗ್ಗೆ ಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶ ಇಲ್ಲ. ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುವಂಥದ್ದು’ ಎಂದೂ ಅಹಿಂಸಾ ಸೋಮವಾರ (ಜುಲೈ 2) ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಿದೆ.
ಸೂಪರ್ ನ್ಯೂಮರರಿ ಹುದ್ದೆ: ಬಡ್ತಿ ಮೀಸಲು ಕಾಯ್ದೆ ರದ್ದುಪಡಿಸಿ ನೀಡಿದ್ದ ತೀರ್ಪಿನಲ್ಲಿ, 1978ರ ಏ. 27ರಿಂದ ಅನ್ವಯವಾಗುವಂತೆ ನೌಕರರ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಿ ತತ್ಪರಿಣಾಮ (ಹಿಂಬಡ್ತಿ– ಮುಂಬಡ್ತಿ) ಕ್ರಮ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೆ, ತೀರ್ಪು ಜಾರಿಯಿಂದ ಹಿಂಬಡ್ತಿ ಪಡೆಯುವ ನೌಕರರ ಹಿತರಕ್ಷಣೆಗಾಗಿ ಸೂಪರ್ ನ್ಯೂಮರರಿ (ಸಂಖ್ಯಾಧಿಕ) ಹುದ್ದೆ ಸೃಜಿಸುವ ಅವಕಾಶ ನೀಡುವ ಮಸೂದೆ ಸಿದ್ಧಪಡಿಸಿದ್ದ ಸರ್ಕಾರ, ಅಂಕಿತಕ್ಕಾಗಿ ರಾಷ್ಟ್ರಪತಿಗೆ ಕಳುಹಿಸಿತ್ತು. ಜೊತೆಯಲ್ಲೇ ತೀರ್ಪು ಪಾಲನೆಗೂ ಕ್ರಮ ತೆಗೆದುಕೊಂಡಿತ್ತು.
ಈ ಮಧ್ಯೆ, ರಾಜ್ಯ ಸರ್ಕಾರ ಆದೇಶ ಅನುಷ್ಠಾನ ಆಗುತ್ತಿಲ್ಲ ಎಂದು ಅಹಿಂಸಾ ಸಂಘಟನೆ ಸುಪ್ರೀಂ ಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಮೇ 9ರಂದು ವಿಚಾರಣೆ ನಡೆಸಿದ್ದ ಕೋರ್ಟ್, ಜುಲೈ 4ರ ಒಳಗೆ ತೀರ್ಪು ಅನುಷ್ಠಾನ ಆಗಿರುವ ಕುರಿತು ಸಮಗ್ರ ಮಾಹಿತಿಯೊಂದಿಗೆ ಪ್ರಮಾಣ ಪತ್ರ ಸಲ್ಲಿಸುವಂತೆ ಆದೇಶ ನೀಡಿತ್ತು. ಆದರೆ, ಮಸೂದೆಗೆ ರಾಷ್ಟ್ರಪತಿ ಅಂಕಿತ (ಜೂನ್ 14) ಹಾಕಿದ ಬೆನ್ನಲ್ಲೆ ಸರ್ಕಾರ, ಕಾಯ್ದೆ ರೂಪಿಸಿದೆ.