ಏಪ್ರಿಲ್ ವೇತನದಲ್ಲೇ ಪರಿಷ್ಕೃತ ಮೊತ್ತ
ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸು ಅನ್ವಯ ಸರ್ಕಾರಿ ನೌಕರರ ಪರಿಷ್ಕೃತ ವೇತನ ಏಪ್ರಿಲ್ ತಿಂಗಳ ಸಂಬಳದಲ್ಲೇ ಕೈಗೆ ಸಿಗಲಿದೆ. ಇದರಿಂದ 5.20 ಲಕ್ಷ ನೌಕರರಿಗೆ ಪ್ರಯೋಜನವಾಗಲಿದೆ.
ಅನುದಾನಿತ ಶಿಕ್ಷಣ ಸಂಸ್ಥೆಗಳ, ಸ್ಥಳೀಯ ಸಂಸ್ಥೆಗಳ, ಪದವಿ ಶಿಕ್ಷಣ ವಿದ್ಯಾಲಯ ಹಾಗೂ ವಿಶ್ವವಿದ್ಯಾಲಯಗಳಲ್ಲಿನ ಸುಮಾರು 73,000 ಬೋಧಕೇತರ ಸಿಬ್ಬಂದಿಗಳಿಗೂ ಪರಿಷ್ಕೃತ ವೇತನ ದೊರಕಲಿದೆ.
ವೇತನ ಪರಿಷ್ಕೃರಣೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಪ್ರತಿ ವರ್ಷ ₹ 10,508 ಕೋಟಿ ಹೆಚ್ಚುವರಿ ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ನೌಕರರ ವೇತನ ಪರಿಷ್ಕರಿಸಿ ರಾಜ್ಯ ಸರ್ಕಾರ ಈ ಹಿಂದೆಯೇ ಆದೇಶ ಹೊರಡಿಸಿತ್ತು. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಆದೇಶ ಅನುಷ್ಠಾನಕ್ಕೆ ಚುನಾವಣೆ ಆಯೋಗದ ಅನುಮೋದನೆ ಪಡೆಯಬೇಕಾಗಿತ್ತು. ಈ ಕುರಿತು ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವಕ್ಕೆ ಕೇಂದ್ರ ಚುನಾವಣಾ ಆಯೋಗ ಒಪ್ಪಿಗೆ ಸೂಚಿಸಿದೆ. ಪರಿಷ್ಕೃತ ವೇತನ ಅನುಷ್ಠಾನ ಸಂಬಂಧ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
‘ಆಯಾ ಇಲಾಖೆಗಳು ನೌಕರರ ಎಚ್‌ಆರ್‌ಎಂಎಸ್‌ನಲ್ಲಿ (ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ) ಪರಿಷ್ಕೃತ ವೇತನ ಶ್ರೇಣಿಯನ್ನು ನಮೂದಿಸಲಿವೆ. ಮೇ ತಿಂಗಳಲ್ಲಿ ವಿತರಿಸುವ ಏಪ್ರಿಲ್ ತಿಂಗಳ ವೇತನ, ಪರಿಷ್ಕೃತ ವೇತನವಾಗಿರುತ್ತದೆ’ ಎಂದು ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ‘ಪ್ರಜಾವಾಣಿ’ಗೆ ತಿಳಿಸಿದರು.
ಸರ್ಕಾರಿ ನೌಕರರ ವೇತನವನ್ನು 2017ರ ಜುಲೈ ಒಂದರಿಂದ ಪೂರ್ವಾನ್ವಯವಾಗುವಂತೆ ಶೇ 30ರಷ್ಟು ಹೆಚ್ಚಿಸುವಂತೆ ಎಂ.ಆರ್. ಶ್ರೀನಿವಾಸಮೂರ್ತಿ ಅಧ್ಯಕ್ಷತೆಯ ಆರನೇ ವೇತನ ಶಿಫಾರಸು ಮಾಡಿತ್ತು. ಕನಿಷ್ಠ ವೇತನ ₹ 17,000 ಮತ್ತು ಗರಿಷ್ಠ ವೇತನ ₹ 1,50,600 ನಿಗದಿಪಡಿಸುವಂತೆಯೂ ಆಯೋಗ ಶಿಫಾರಸು ಮಾಡಿದೆ.
₹ 8,500ರ ಕನಿಷ್ಠ ಪಿಂಚಣಿ ಮತ್ತು ₹ 75,300ರ ಗರಿಷ್ಠ ಪಿಂಚಣಿಗೂ ಶಿಫಾರಸು ಮಾಡಲಾಗಿದೆ. ಇದರಿಂದಾಗಿ ಈವರೆಗೆ ಡಿ ಗ್ರೂಪ್ ನೌಕರರಿಗೆ ಇದ್ದ ಆರಂಭಿಕ ಕನಿಷ್ಠ ಮೂಲವೇತನ ₹ 9,600 ಇನ್ನು ₹ 17,000ಕ್ಕೆ ಏರಿಕೆಯಾಗಲಿದೆ.
ಶೇ 45. 25ರಷ್ಟಿದ್ದ ತುಟ್ಟಿಭತ್ಯೆ ಮೂಲವೇತನದಲ್ಲಿ ವಿಲೀನವಾಗಲಿದೆ. ಜತೆಗೆ ಶೇ 30ರ ಫಿಟ್ ಮೆಂಟ್(ತಾರತಮ್ಯ ಸರಿದೂಗಿಸುವ ಮೊತ್ತ) ನೌಕರರಿಗೆ ಸಿಗಲಿದೆ.
ಕೈಪಿಡಿ ಸಿದ್ಧ:ತುಟ್ಟಿಭತ್ಯೆ ಹಾಗೂ ಫಿಟ್ ಮೆಂಟ್ ವಿಲೀನದ ಬಳಿಕ ಯಾವ ಹಂತದ ನೌಕರರ ಮೂಲವೇತನವು ಎಷ್ಟಕ್ಕೆ ಏರಿಕೆಯಾಗಲಿದೆ, ಯಾವ ಭತ್ಯೆ ಎಷ್ಟು ಸಿಗಲಿದೆ ಎಂಬ ಪೂರ್ಣ ವಿವರ ಒಳಗೊಂಡಿರುವ 61 ಪುಟಗಳ ಕೈಪಿಡಿಯನ್ನು ಆರ್ಥಿಕ ಇಲಾಖೆ ಪ್ರಕಟಿಸಿದೆ.
ದ್ವಿತೀಯ ದರ್ಜೆ ಸಹಾಯಕರು, ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರು, ಅರಣ್ಯ ರಕ್ಷಕರು, ಗ್ರೂಪ್ ಎ ನೌಕರರು ಈಗ ಪಡೆಯುತ್ತಿರುವ ಮೂಲವೇತನ ಎಷ್ಟು, ಪರಿಷ್ಕರಣೆ ಬಳಿಕ ಎಷ್ಟು ಮೊತ್ತಕ್ಕೆ ನಿಗದಿಯಾಗಲಿದೆ ಎಂಬ ಪೂರ್ಣ ವಿವರ ಕೈಪಿಡಿಯಲ್ಲಿದೆ. ಆಯಾ ಶ್ರೇಣಿಯ ನೌಕರ ಸದ್ಯ ಪಡೆಯುತ್ತಿರುವ ವೇತನ–ಪರಿಷ್ಕೃತ ವೇತನ ಎಷ್ಟು ಎಂಬುದನ್ನುಉದಾಹರಣೆಗಳ ಮೂಲಕ ಕೈಪಿಡಿ ವಿವರಿಸಿದೆ.