ಮಾಹಿತಿ ಹಕ್ಕು ಕಾಯ್ದೆಯಡಿ ನೌಕರರ ವಯಕ್ತಿಕ ಮಾಹಿತಿ ನೀಡುವಂತಿಲ್ಲ.
****************************
ಕೊಪ್ಪಳ ಮಾ. 23 (ಕರ್ನಾಟಕ ವಾರ್ತೆ): ಮಾಹಿತಿ ಹಕ್ಕು ಕಾಯ್ದೆಯಡಿ ಯಾವುದೇ ಸರ್ಕಾರಿ ಅಧಿಕಾರಿ, ನೌಕರರ ವಯಕ್ತಿಕ ಮಾಹಿತಿಯನ್ನು ಅರ್ಜಿದಾರರಿಗೆ ಕೊಡುವಂತಿಲ್ಲ ಎಂದು ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಕೆ.ಎಂ. ಚಂದ್ರೇಗೌಡ ಅವರು ಹೇಳಿದರು.
ಕರ್ನಾಟಕ ಮಾಹಿತಿ ಆಯೋಗದ ವತಿಯಿಂದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗಾಗಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರದಂದು ಹಮ್ಮಿಕೊಳ್ಳಲಾದ ಮಾಹಿತಿ ಹಕ್ಕು ಕಾಯ್ದೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರಿ ಕಚೇರಿಗಳ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಉದ್ದೇಶಕ್ಕಾಗಿಯೇ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿದೆ. ಆದರೆ ಸರ್ಕಾರಿ ನೌಕರರ ವಯಕ್ತಿಕ ಮಾಹಿತಿಯನ್ನು ಕೇಳುವಂತಹ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಕೆಲವು ಇಲಾಖೆಗಳು ಮಾಹಿತಿಯನ್ನು ಕೂಡ ನೀಡುತ್ತಿವೆ. ಆದರೆ ಇದು ಸರಿಯಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ನಿಯಮ 8(1)ಜೆ ಅನ್ವಯ ಸರ್ಕಾರಿ ನೌಕರರ ಯಾವುದೇ ವಯಕ್ತಿಕ ಮಾಹಿತಿಯನ್ನು ನೀಡುವಂತಿಲ್ಲ. ಚರ, ಸ್ಥಿರಾಸ್ತಿ ವಿವರ, ಬಯೋಡೇಟಾ, ವಯಕ್ತಿಕ ದಾಖಲೆಗಳು, ನೇಮಕಾತಿ ದಾಖಲೆಗಳು, ಸೇವಾಪುಸ್ತಕ, ಅಂಕಪಟ್ಟಿ, ವಿದ್ಯಾರ್ಹತೆ ಕುರಿತ ದಾಖಲೆಗಳು, ಜಾತಿ ಪ್ರಮಾಣಪತ್ರ, ಪಾಸ್‍ಪೋರ್ಟ್, ಭವಿಷ್ಯನಿಧಿ ವಿವರ, ಸರ್ಕಾರಿ ವಸತಿ ಗೃಹ ಹೊರತುಪಡಿಸಿ ಖಾಸಗಿ ಮನೆಯ ವಿಳಾಸ ಸೇರಿದಂತೆ ವಯಕ್ತಿಕ ಮಾಹಿತಿಯನ್ನು ನೀಡುವಂತಿಲ್ಲ. ಅರ್ಜಿದಾರರು, ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ತೊಂದರೆಯಾದಲ್ಲಿ, ಮೊದಲ ಮೇಲ್ಮನವಿ ಪ್ರಾಧಿಕಾರಕ್ಕೆ ಅಪೀಲು ಸಲ್ಲಿಸಬೇಕೆ ಹೊರತು, ನೇರವಾಗಿ ಆಯೋಗಕ್ಕೆ ಅಪೀಲು ಸಲ್ಲಿಸಬಾರದು, ಮೇಲ್ಮನವಿ ಪ್ರಾಧಿಕಾರದಿಂದಲೂ ಮಾಹಿತಿ ಲಭ್ಯವಾಗದಿದ್ದಲ್ಲಿ ಮಾತ್ರ ಆಯೋಗಕ್ಕೆ ಅಪೀಲು ಸಲ್ಲಿಸಬೇಕು. ಅರ್ಜಿಗೆ ಬಿಪಿಎಲ್ ಕಾರ್ಡ್ ಪ್ರತಿ ಸಲ್ಲಿಸಿ 100 ಪುಟ ಉಚಿತವಾಗಿ ಮಾಹಿತಿ ನೀಡಿ ಎಂದು ಅರ್ಜಿ ಸಲ್ಲಿಸಿದರೆ, ಕೊಡುವ ಅಗತ್ಯವಿಲ್ಲ. ಚಾಲ್ತಿ ಸಾಲಿನ ಆದಾಯ ಪ್ರಮಾಣಪತ್ರ ಸಲ್ಲಿಸಿದಲ್ಲಿ ಮಾತ್ರ ಬಿಪಿಎಲ್ ಎಂಬುದಾಗಿ ಪರಿಗಣಿಸಬೇಕು. ಕಾಯ್ದೆಯಡಿ ಯಾವ ಮಾಹಿತಿ ಕೊಡಬೇಕು, ಕೊಡಬಾರದು ಎಂಬುದರ ಬಗ್ಗೆ ಸುಪ್ರಿಂಕೋರ್ಟ್, ಹೈಕೋರ್ಟ್‍ಗಳು ಅನೇಕ ಆದೇಶಗಳನ್ನು ಹೊರಡಿಸಿವೆ. ಸರ್ಕಾರವೂ ಕೂಡ ಸುತ್ತೋಲೆಗಳನ್ನು ಹೊರಡಿಸಿದೆ, ಇವೆಲ್ಲವುಗಳ ಬಗ್ಗೆ ಅಧಿಕಾರಿಗಳು ವೆಬ್‍ಸೈಟ್ ಮೂಲಕ ಮಾಹಿತಿ ಪಡೆಯಬಹುದು ಎಂದು ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಕೆ.ಎಂ. ಚಂದ್ರೇಗೌಡ ಅವರು ಹೇಳಿದರು.
ಯಾವುದೇ ವ್ಯಕ್ತಿಗೆ ಜನನ ಮತ್ತು ಮರಣದ ದಾಖಲೆ ಹೇಗೆ ಇರುತ್ತದೆಯೋ, ಅದೇ ರೀತಿ ಕಡತಗಳಿಗೂ ಸಹ ಪ್ರಾರಂಭ ಹಾಗೂ ಮುಕ್ತಾಯದ ದಿನಾಂಕ ಇರುತ್ತದೆ. ಸರ್ಕಾರವೇ ಕಡತಗಳ ನಿರ್ವಹಣೆಗೆ ವರ್ಗೀಕರಣಗೊಳಿಸಿದೆ. ಆದರೆ ಕೆಲವು ಇಲಾಖೆಗಳು ಕಡತಗಳನ್ನು ರಾಶಿ, ರಾಶಿಯಾಗಿ ಜೋಡಿಸಿಟ್ಟುಕೊಳ್ಳುತ್ತಾರೆ. ಕೆಲವು ಕಡತಗಳಿಗೆ ಒಂದು ವರ್ಷ, 02, 05, 10 ವರ್ಷ ಹೀಗೆ ವರ್ಗೀಕರಣಗೊಳಿಸಿದ್ದು, ನಿಗದಿತ ಅವಧಿ ಬಳಿಕ, ಕಡತಗಳನ್ನು ನಿಯಮಾನುಸಾರ ನಾಶಪಡಿಸಬೇಕು. ಅದಕ್ಕೆ ಸಂಬಂಧಿಸಿದ ರಜಿಸ್ಟರ್ ನಿರ್ವಹಿಸಬೇಕು. ಅರ್ಜಿದಾರರು ಇಡೀ ರಾಜ್ಯ ಅಥವಾ ಜಿಲ್ಲೆಗೆ ಸಂಬಂಧಿಸಿದ ಮಾಹಿತಿಯನ್ನು ಕೋರಿದಾಗ, ನಿಯಮ 6(3) ರಡಿ ಎಲ್ಲ ಜಿಲ್ಲೆಗಳು ಅಥವಾ ತಾಲೂಕು ಮಟ್ಟದ ಅಧಿಕಾರಿಗಳಿಗೆ ವರ್ಗಾಯಿಸುವುದು ಕಂಡುಬರುತ್ತಿದ್ದು, ಆದರೆ ಇದು ಸರಿಯಾದ ಕ್ರಮವಲ್ಲ. ನಿಯಮದಡಿ, ಅರ್ಜಿಯನ್ನು ಒಂದಕ್ಕಿಂತ ಹೆಚ್ಚಿನ ಪ್ರಾಧಿಕಾರಗಳಿಗೆ ನಿಯಮ 6(3) ರಡಿ ವರ್ಗಾಯಿಸುವಂತಿಲ್ಲ. ಅರ್ಜಿದಾರರು ಸಂಬಂಧಿಸಿದ ಪ್ರಾಧಿಕಾರಗಳಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕೆ ಹೊರತು, ಒಂದೇ ಪ್ರಾಧಿಕಾರದವರು, ಮಾಹಿತಿಯನ್ನು ಕ್ರೋಢೀಕರಿಸಿ ಕೊಡುವಂತಿಲ್ಲ. ಬೇರೆ ಯಾವುದೋ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಕೋರಿ ಇನ್ಯಾವುದೋ ಇಲಾಖೆಯ ಕಚೇರಿಗೆ ಅರ್ಜಿ ಕೊಡುವುದು ಸಹ ಕಂಡುಬರುತ್ತಿದ್ದು, ಇದೂ ಸಹ ಸರಿಯಾದ ಕ್ರಮವಲ್ಲ ಎಂದು ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಕೆ.ಎಂ. ಚಂದ್ರೇಗೌಡ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಪಾಲ್ಗೊಂಡಿದ್ದರು.