ರಾಜ್ಯ ಸರ್ಕಾರಿ ನೌಕರರಿಗೆ ಶೇ.3.5ರಷ್ಟು ತುಟ್ಟಿ ಭತ್ಯೆ ಹೆಚ್ಚಳ..?
ಬೆಂಗಳೂರು,ಏ.8-ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೇ.6ರಷ್ಟು ತುಟ್ಟಿಭತ್ಯೆ ನೀಡುವ ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಕೇಂದ್ರ ಜ.1ರಿಂದ ಪೂರ್ವಾನ್ವಯದಂತೆ ತುಟ್ಟಿಭತ್ಯೆ ನೀಡಿದ್ದು, ಅದೇ ರೀತಿ ರಾಜ್ಯ ಸರ್ಕಾರ ಸಹ ಜ.1ರಿಂದ ಪೂರ್ವನ್ವಯದಂತೆ ಜಾರಿಗೊಳಿಸಲಿದೆ. ಕೇಂದ್ರ ಸರ್ಕಾರದ ತುಟ್ಟಿಭತ್ಯೆ ಹೆಚ್ಚಳದ ಪ್ರತಿ ದೊರೆತ ಕೂಡಲೇ ರಾಜ್ಯ ಹಣಕಾಸು ಇಲಾಖೆ ತುಟ್ಟಿ ಭತ್ಯೆ ಹೆಚ್ಚಿಸುವ ಪ್ರಕ್ರಿಯೆಗೆ ಚಾಲನೆ ನೀಡಲಿದೆ. ಹಣಕಾಸು ಇಲಾಖೆ ಮೂಲಗಳ ಪ್ರಕಾರ ಶೇ.3.5ರಷ್ಟು ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಲಭ್ಯವಾಗಲಿದೆ.
ಆರ್ಥಿಕ ಸಂಪನ್ಮೂಲ ಲಭ್ಯತೆ ಹಾಗೂ ಬೆಲೆ ಸೂಚ್ಯಂಕದ ಲೆಕ್ಕ ಹಾಕಿ ಮೂಲ ವೇತನದ ಮೇಲೆ ಶೇಕಡವಾರು ತುಟ್ಟಿಭತ್ಯೆ ನಿಗದಿ ಮಾಡಲಾಗುತ್ತಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಹೆಚ್ಚಳ ಮಾಡಲಾಗಿತ್ತು. ಮೂಲ ವೇತನದ ಶೇ.25-25 ತುಟ್ಟಿಭ್ಯತೆಯನ್ನು ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿದೆ. ಇದು ಹೊಸ ಪರಿಷ್ಕೃತ ತುಟ್ಟಿಭತ್ಯೆ ಆದೇಶ ಬಂದ ಬಳಿಕ ಶೇ.28.75ರಷ್ಟು ಹೆಚ್ಚಳವಾಗುವ ಸಂಭವವಿದೆ ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿದೆ. ಹೊಸ ತುಟ್ಟಿಭತ್ಯೆ ಆದೇಶ ಹೊರ ಬೀಳಲು 8-10 ದಿನ ಆಗಲಿದೆ ಎಂಬ ಮಾಹಿತಿ ದೊರೆತಿದೆ. ರಾಜ್ಯ ಸರ್ಕಾರಿ ನೌಕರರಿಗೆ ಶೇ.3.5ರಷ್ಟು ಹೆಚ್ಚಳವಾಗಲಿದೆ. ಕಳೆದ ಬಾರಿ ಶೇ.4.25ರಷ್ಟು ನೀಡಲಾಗಿತ್ತು.