Search in ThisBlogಈಬ್ಲಾಗಲ್ಲಿ ವಿಷಯ ಹುಡುಕಿ
Thursday, September 27, 2018
October 3
ಅ. 3ರ ತೀರ್ಪು ಸರ್ಕಾರಕ್ಕೆ ಮಹತ್ವದ್ದು
ಪ್ರಜಾವಾಣಿ ವಾರ್ತೆ
ಬೆಂಗಳೂರು: ಬಡ್ತಿ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ಬುಧವಾರ ನೀಡಿದ ತೀರ್ಪಿಗಿಂತ ಬಿ.ಕೆ. ಪವಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಅ. 3ರಂದು ನೀಡಲಿರುವ ತೀರ್ಪು ರಾಜ್ಯ ಸರ್ಕಾರದ ಪಾಲಿಗೆ ಮಹತ್ವದ್ದಾಗಿದೆ.
‘ಬಡ್ತಿಯಲ್ಲೂ ಮೀಸಲಾತಿ ನೀಡುವುದು ರಾಜ್ಯ ಸರ್ಕಾರದ ವಿವೇಚನೆಗೆ ಒಳಪಟ್ಟ ವಿಚಾರ’ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ. ಆದರೆ, ‘ಬಡ್ತಿ ಮೀಸಲು ಕಾಯ್ದೆ–2002’ ಅನ್ನು ರದ್ದುಪಡಿಸಿ 2017ರ ಫೆ. 9ರಂದು ನೀಡಿದ್ದ ತೀರ್ಪು ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ವಾರ ಬರಲಿರುವ ತೀರ್ಪಿಗಾಗಿ ಸರ್ಕಾರ ಕಾಯುತ್ತಿದೆ.
ಬಡ್ತಿಯಲ್ಲೂ ಮೀಸಲಾತಿ ಅನುಸರಿಸುವ ವೇಳೆ ಮೂರು ಅಂಶಗಳ (ಪ್ರಾತಿನಿಧ್ಯದ ಕೊರತೆ, ಹಿಂದುಳಿದಿರುವಿಕೆ, ಒಟ್ಟಾರೆ ದಕ್ಷತೆ) ಮಾಹಿತಿ ಕಲೆಹಾಕಬೇಕು ಎಂದು ಸುಪ್ರೀಂ ಕೋರ್ಟ್ ಈ ಹಿಂದೆಯೇ ಹೇಳಿತ್ತು.
ಫೆ. 9ರಂದು ನೀಡಿದ್ದ ತೀರ್ಪು ಜಾರಿಯಿಂದ ಹಿಂಬಡ್ತಿ ಭೀತಿಯಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೌಕರರ ಹಿತ ಕಾಪಾಡಲು ರಾಜ್ಯ ಸರ್ಕಾರ, ಈ ಮೂರೂ ಅಂಶಗಳನ್ನು ಉಲ್ಲೇಖಿಸಿ ‘ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ ಕಾಯ್ದೆ’ ಜಾರಿಗೆ ತಂದಿದೆ.
ಕೋರ್ಟ್ ನೀಡಿದ ತೀರ್ಪು ಪಾಲನೆ ಆಗಿಲ್ಲ ಎಂದು ಸಲ್ಲಿಕೆಯಾದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ (ಅ. 3) ವೇಳೆ ಕಾಯ್ದೆಯ ಸಿಂಧುತ್ವ ಚರ್ಚೆಗೆ ಬರುವ ಸಾಧ್ಯತೆ ಇದೆ. ಹಿಂದುಳಿಯುವಿಕೆ ಕಾರಣಕ್ಕೆ ಬಡ್ತಿಯಲ್ಲಿ ಮೀಸಲಾತಿ ನೀಡುವಾಗ ಪರಿಶಿಷ್ಟ ಸಮುದಾಯದ ನೌಕರರ ಪ್ರಾತಿನಿಧ್ಯದ ಕೊರತೆ ಮತ್ತು ಕಾರ್ಯದಕ್ಷತೆ ಗಣನೆಗೆ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ 2006ರಲ್ಲಿಯೇ ಸೂಚಿಸಿತ್ತು.
ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಕೆ. ರತ್ನಪ್ರಭಾ ಅವರು ಈ ಮೂರೂ ಅಂಶಗಳ ಕುರಿತ ಅಧ್ಯಯನ ನಡೆಸಿ, ಬಡ್ತಿಯಲ್ಲಿ ಮೀಸಲಾತಿ ನೀಡಿರುವುದನ್ನು ಸಮರ್ಥಿಸಿ ವರದಿ ಸಲ್ಲಿಸಿದ್ದರು. ಬಡ್ತಿಯಲ್ಲಿ ಮೀಸಲಾತಿಯನ್ನು ವಿಸ್ತರಿಸುವುದರಿಂದ ಆಡಳಿತದಲ್ಲಿನ ಸಮಗ್ರ ದಕ್ಷತೆಗೆ ಅಡ್ಡಿ ಆಗುವುದಿಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದರು. ಬಳಿಕ ರಾಜ್ಯ ಸರ್ಕಾರ, ಕಾನೂನು ತಜ್ಞರು ಮತ್ತು ರಾಜ್ಯ ಕಾನೂನು ಆಯೋಗದ ಅಭಿಪ್ರಾಯ ಪಡೆದು ಮಸೂದೆ ಸಿದ್ಧಪಡಿಸಿತ್ತು. ಅದಕ್ಕೆ, ರಾಷ್ಟ್ರಪತಿ ಒಪ್ಪಿಗೆ ಪಡೆದು, ಕಾಯ್ದೆ ರಚಿಸಲಾಗಿದೆ.
Sc St Promotion updates
2006ರ ತೀರ್ಪಿಗೆ ಮನ್ನಣೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಕೆನೆಪದರಕ್ಕೆ ಬಡ್ತಿ ಮೀಸಲು ಇಲ್ಲ
ಪ್ರಜಾವಾಣಿ ವಾರ್ತೆ
ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಮುಂದುವರೆಯಲಿದೆ. ಆದರೆ ಅವರಲ್ಲಿಯೇ ಮುಂದುವರೆದವರು- ಸಬಲರನ್ನು ಒಳಗೊಂಡ 'ಕೆನೆಪದರ'ಕ್ಕೆ ಈ ಅವಕಾಶ ಇನ್ನು ಮುಂದೆ ಲಭ್ಯವಿಲ್ಲ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವಾಗ ಅವರ ಪೈಕಿ ಮುಂದುವರೆದವರನ್ನು ಹೊರಗಿಡುವ 'ಕೆನೆಪದರ ತತ್ವ'ವನ್ನು ಅನ್ವಯಿಸಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ತರ ತೀರ್ಪು ನೀಡಿತು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಅತಿ ಹಿಂದುಳಿದ ವರ್ಗಗಳು. ಈ ವರ್ಗಗಳ 'ಕೆನೆಪದರ'ಕ್ಕೆ ನೀಡಲಾಗುವ ಯಾವುದೇ ಮೀಸಲಾತಿಯನ್ನು ರದ್ದು ಮಾಡುವ ಅಧಿಕಾರ ಸಂವಿಧಾನಿಕ ನ್ಯಾಯಾಲಯಕ್ಕೆ ಇದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಐವರು
ನ್ಯಾಯಮೂರ್ತಿಗಳ ನ್ಯಾಯಪೀಠ ಹೇಳಿದೆ. ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ಆರ್.ಎಫ್.ನಾರಿಮನ್, ಸಂಜಯ ಕಿಶನ್ ಕೌಲ್ ಹಾಗೂ ಇಂದು ಮಲ್ಹೋತ್ರ ಅವರನ್ನು ಈ ನ್ಯಾಯಪೀಠ ಒಳಗೊಂಡಿತ್ತು. ಪೀಠದ ಪರವಾಗಿ ನಾರಿಮನ್ ತೀರ್ಪನ್ನು ಬರೆದಿದ್ದಾರೆ.
ಬಡ್ತಿಯಲ್ಲಿ ಮೀಸಲಾತಿ ಪ್ರಶ್ನಿಸಿ ಎಂ.ನಾಗರಾಜ್ ಮತ್ತಿತರರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೆನೆಪದರವನ್ನು ಅನ್ವಯಿಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ 2006ರಲ್ಲಿ ನೀಡಿದ್ದ ತೀರ್ಪಿನ ಹಲವು ಅಂಶಗಳನ್ನು ಇಂದಿನ ತೀರ್ಪು ಎತ್ತಿ ಹಿಡಿಯಿತು. ಬಡ್ತಿಯಲ್ಲಿ ಮೀಸಲಾತಿ ನೀಡುವಾಗ ಪ್ರಾತಿನಿಧ್ಯದ ಕೊರತೆ ಮತ್ತು ಒಟ್ಟಾರೆ ಆಡಳಿತಾತ್ಮಕ ದಕ್ಷತೆಯನ್ನು ಪರಿಗಣಿಸಬೇಕೆಂಬ ಅಂಶಗಳಿಗೆ ತನ್ನ ಸಮ್ಮತಿ ಮುದ್ರೆ ಒತ್ತಿತು. ಆದರೆ 2006ರ ಈ ತೀರ್ಪನ್ನು ಏಳು ಮಂದಿ ಸದಸ್ಯರ ನ್ಯಾಯಪೀಠದ ಮರುಪರಿಶೀಲನೆಗೆ ಒಪ್ಪಿಸಬೇಕು ಎಂಬ ಅಹವಾಲನ್ನು ತಳ್ಳಿ ಹಾಕಿತು. ಬಡ್ತಿ ಮೀಸಲಾತಿಯ ಹುದ್ದೆಗಳ ಪ್ರಮಾಣವು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿರಬೇಕು ಎಂಬ ಕೇಂದ್ರ ಸರ್ಕಾರದ ವಾದವನ್ನೂ ನ್ಯಾಯಪೀಠ ತಿರಸ್ಕರಿಸಿತು.
ಪರಿಶಿಷ್ಟರ ಬಡ್ತಿಗೆ ಕೆನೆಪದರ ತತ್ವವನ್ನು ಅನ್ವಯಿಸಬೇಕು ಎಂಬ 2006ರ ತೀರ್ಪಿನ ಅಂಶವನ್ನು ಎತ್ತಿ ಹಿಡಿದಿರುವ ನ್ಯಾಯಾಲಯವು, ಪರಿ
ಶಿಷ್ಟರ ಹಿಂದುಳಿದಿರುವಿಕೆ ಗುರುತಿಸಲು ಈ ತತ್ವವನ್ನು ಅನ್ವಯಿಸುವುದು ಸರಿಯಲ್ಲ ಎಂದಿತು. ಹಿಂದುಳಿದಿರುವಿಕೆಯನ್ನು ತೀರ್ಮಾನಿಸಲು ನಿರ್ದಿಷ್ಟ ಅಂಕಿ ಅಂಶವನ್ನು ರಾಜ್ಯ ಸರ್ಕಾರಗಳು ಸಂಗ್ರಹಿಸುವ ಅಗತ್ಯ ಇಲ್ಲ ಎಂದು ಸಾರಿತು. ಪ್ರಾತಿನಿಧ್ಯದ ಕೊರತೆಯ ಕುರಿತು 2006ರ ತೀರ್ಪು ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ರಾಜ್ಯ ಸರ್ಕಾರಗಳು ಅಂಕಿ ಅಂಶಗಳನ್ನು ಸಂಗ್ರಹಿಸಬೇಕು. ಈ ಅಂಕಿ ಅಂಶಗಳನ್ನು ನ್ಯಾಯಾಲಯಗಳು ಪರಿಶೀಲಿಸಲಿವೆ ಎಂದು ನಿರ್ದೇಶನ ನೀಡಿತು.
ಸಂವಿಧಾನದ 341 ಮತ್ತು 342 ಕಲಮುಗಳ ಅಡಿಯಲ್ಲಿನ ಪರಿಶಿಷ್ಟ ಜಾತಿ ಪಂಗಡಗಳ ಪಟ್ಟಿಗೆ ಯಾವುದೇ ಜಾತಿಯನ್ನು ಸಮುದಾಯವನ್ನು ಸಂಸತ್ತು ಸೇರಿಸಬಹುದು. ಆದರೆ ಅದೇ ಜಾತಿ, ಗುಂಪು, ಉಪ ಗುಂಪಿನೊಳಗೆ ಸಮಾನತೆಯ ತತ್ವವನ್ನು ಒರೆಗಲ್ಲಿಗೆ ಹಚ್ಚುವ ಮೂಲಕ 'ಕೆನೆಪದರ' ತತ್ವ ಅನ್ವಯಿಸುವ ಅಧಿಕಾರ ನ್ಯಾಯಾಲಯಕ್ಕೆ ಉಂಟು ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಹಿಂದುಳಿದ ವರ್ಗಗಳ ನಾಗರಿಕರು ಮುಂದುವರೆದು ಇತರೆ ಭಾರತೀಯ ನಾಗರಿಕರ ಜೊತೆ ಸಮಾನತೆಯ ಆಧಾರದಲ್ಲಿ ಕೈ ಕೈ ಹಿಡಿದು ನಡೆಯುವ ಸ್ಥಿತಿಯನ್ನು ಸೃಷ್ಟಿಸುವುದೇ ಮೀಸಲಾತಿಯ ಮೂಲ ಉದ್ದೇಶ. ಆದರೆ ಅದೇ ವರ್ಗದಲ್ಲಿನ ಕೆನೆಪದರವು ಸರ್ಕಾರಿ ಕ್ಷೇತ್ರದ ಎಲ್ಲ ಉದ್ಯೋಗಗಳನ್ನು ಬಾಚಿಕೊಂಡು ತಮ್ಮದೇ ಸಮುದಾಯಗಳ ಇತರರನ್ನು ಹಿಂದೆಯೇ ಉಳಿಸುವ ಪ್ರವೃತ್ತಿ ಕಾಯಂ ಆಗಿ ಮುಂದುವರೆದರೆ ಮೀಸಲಾತಿಯ ಮೂಲ ಉದ್ದೇಶ ಈಡೇರುವುದಿಲ್ಲ. ಕೆನೆಪದರವನ್ನು ಗುರುತಿಸಿ ಹೊರಗಿಡದಿದ್ದರೆ ಅದೇ ಜಾತಿ- ವರ್ಗದೊಳಗಿನ ಅಸಮಾನರನ್ನು ಸಮಾನವಾಗಿ ನೋಡಿದಂತೆ ಆಗುತ್ತದೆ.
ಕೆನೆಪದರ ತತ್ವವನ್ನು ಅನ್ವಯಿಸಿದರೆ ಪರಿಶಿಷ್ಟ ಜಾತಿ- ಪಂಗಡಗಳ ಪಟ್ಟಿಯಲ್ಲಿ ನ್ಯಾಯಾಲಯ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡಿದಂತೆ ಆಗುವುದಿಲ್ಲ. ಈ ಪಟ್ಟಿ ಹಿಂದಿನಂತೆಯೇ ಮುಂದುವರೆಯಲಿದೆ. ಆದರೆ ಕೆನೆಪದರಕ್ಕೆ ಸೇರುವ ಮೂಲಕ ಅಸ್ಪೃಶ್ಯತೆ ಅಥವಾ ಹಿಂದುಳಿದಿರುವಿಕೆಯಿಂದ ಹೊರಬಂದ ನಿರ್ದಿಷ್ಟ ಗುಂಪು ಅಥವಾ ಉಪಗುಂಪಿನ ವ್ಯಕ್ತಿಗಳನ್ನು ಮೀಸಲಾತಿಯಿಂದ ಹೊರಗಿಡ
ಲಾಗುತ್ತದೆ ಅಷ್ಟೇ. ಅವರು ಪರಿಶಿಷ್ಟ ಜಾತಿಗಳು ಪಂಗಡಗಳ ಪಟ್ಟಿಯಲ್ಲೇ ಮುಂದುವರೆಯುತ್ತಾರೆ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪಂಡಗಳಿಗೆ ಕೆನೆಪದರ ತತ್ವ ಅನ್ವಯ ಆಗುವುದಿಲ್ಲ ಎಂಬ ಕೇಂದ್ರದ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿತು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪಟ್ಟಿಗೆ ನಿರ್ದಿಷ್ಟ ಮಾನದಂಡಗಳ ಆಧಾರದ ಮೇಲೆ ಜಾತಿಗಳು- ಸಮುದಾಯಗಳನ್ನು ಸೇರಿಸಲು ಸಂಸತ್ತಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಈ ಜಾತಿಗಳು ಮತ್ತು ಸಮುದಾಯಗಳ ಕೆನೆಪದರವನ್ನು ಮೀಸಲಾತಿಯಿಂದ ನ್ಯಾಯಾಲಯ ಹೊರಗೆ ಇರಿಸುವುದು ನ್ಯಾಯಾಲಯದ ಅಧಿಕಾರ ವ್ಯಾಪ್ತಿಗೆ ಸೇರಿದ್ದು ಎಂದು ತೀರ್ಪು ಸಾರಿದೆ.
ಬಡ್ತಿ ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಪಾಲನೆ ಮಾಡಲಾಗುವುದು
ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
Wednesday, September 26, 2018
No reservation in promotion
ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ ಸುಪ್ರೀಂ ಐತಿಹಾಸಿಕ ತೀರ್ಪು
ಬುಧವಾರ ಈ ಕುರಿತು ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್‌ನ ಐವರು ಸದಸ್ಯರ ಸಂವಿಧಾನಿಕ ಪೀಠ, 2006ರ ಎಂ.ನಾಗರಾಜು ಅವರ ತೀರ್ಪಿನ ಮರು ಪರಿಶೀಲನೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಬಡ್ತಿ ನೀಡುವಾಗ ಮೀಸಲಾತಿ ಅಗತ್ಯವಿಲ್ಲ ಎಂದು ಹೇಳಿತು.
ರಾಜ್ಯ ಸರ್ಕಾರಗಳು ಬಡ್ತಿ ನೀಡುವಾಗ ಎಸ್‌ಸಿ/ಎಸ್‌ಟಿ ಸೇರಿದಂತೆ ಹಿಂದುಳಿದ ವರ್ಗಗಳ ಉದ್ಯೋಗಿಗಳ ದತ್ತಾಂಶವನ್ನು ಸಂಗ್ರಹಿಸುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಎಂ.ನಾಗರಾಜು ಪ್ರಕರಣದಲ್ಲಿ ನೀಡಿದ ತೀರ್ಪಿನ ಮರುಪರಿಶೀಲನೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.