- ಸಾರ್ವತ್ರಿಕ ವರ್ಗಾವಣೆಗೂ ತಟ್ಟಿದ ಬರ
ಬೆಂಗಳೂರು: ರಾಜ್ಯವನ್ನು ಕಂಗೆಡಿಸಿರುವ ಭೀಕರ ಬರ ರಾಜ್ಯ ಸರ್ಕಾರಿ ನೌಕರರಿಗೂ ಬರೆ ಎಳೆದಿದೆ. ತೀವ್ರ ಬರಗಾಲದ ಹಿನ್ನೆಲೆಯಲ್ಲಿ, ಹಲವರ ಪಾಲಿಗೆ ಹಣ ಮಾಡುವ ದಂಧೆಯಂತಾಗಿರುವ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಈ ವರ್ಷ ಬ್ರೇಕ್ ಹಾಕಲು ಸರ್ಕಾರ ತೀರ್ಮಾನಿಸಿದೆ. ಈ ನಿರ್ಧಾರ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಸಾವಿರಾರು ನೌಕರರು ಹಾಗೂ ಒತ್ತಡ ತರುತ್ತಿದ್ದ ಶಾಸಕರ ಪಾಲಿಗೆ ನಿರಾಸೆಯನ್ನುಂಟು ಮಾಡಿದೆ. ರಾಜ್ಯವನ್ನು ಬರ ಕಾಡುತ್ತಿರುವ ಸಂದರ್ಭದಲ್ಲಿ ಸಾರ್ವತ್ರಿಕ ವರ್ಗಾವಣೆಗೆ ಮುಂದಾದರೆ ಸರ್ಕಾರದ ಬಗ್ಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಕಾರಣಕ್ಕೆ ಸಿಎಂ ಸಿದ್ದ ರಾಮಯ್ಯ ಈ ನಿರ್ಧಾರ ಕೈಗೊಂಡಿದ್ದಾರೆಂದು ಉನ್ನತ ಮೂಲಗಳು ಖಚಿತಪಡಿಸಿವೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸೇವಾ ನಿಯಮಗಳ ವಿಭಾಗ ವರ್ಗಾವಣೆಗೆ ಮಾರ್ಗಸೂಚಿಗಳನ್ನು ರೂಪಿ ಸಲು ಸಿದ್ಧತೆ ಮಾಡಿಕೊಂಡಿತ್ತು. ಎಷ್ಟು ಪ್ರಮಾಣದಲ್ಲಿ ವರ್ಗಾವಣೆ ಮಾಡಬೇಕು ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದಾಗಿದ್ದರಿಂದ ಅದ ಕ್ಕಾಗಷ್ಟೇ ಕಾಯಲಾಗುತ್ತಿತ್ತು. ಆದರೆ ಸದ್ಯಕ್ಕೆ ಯಾವುದೇ ನಿಯಮಾವಳಿಗಳನ್ನು ಹೊರಡಿಸುವುದು ಬೇಡವೆಂದು ಮುಖ್ಯಮಂತ್ರಿ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.
ಶಾಲಾ-ಕಾಲೇಜುಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿ ವರ್ಷ ಮೇ ಅಂತ್ಯದೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ. ಅದಕ್ಕಾಗಿ ಮೇ ಮೊದಲ ವಾರದೊಳಗೆ ಮಾರ್ಗಸೂಚಿಗಳು ಹೊರಬೀಳಬೇಕು. ತಡವಾದರೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ನೌಕರರು ಮಾರ್ಗಸೂಚಿಗಳಿಗೆ ಎದುರು ನೋಡುತ್ತಿದ್ದಾರೆ.
ವರ್ಗ ಬ್ರೇಕ್‌ಗೆ 2 ಕಾರಣ: ಮೊದಲನೆಯದಾಗಿ, ಬರದ ಸಂದರ್ಭದಲ್ಲಿ ವರ್ಗಾವಣೆಗೆ ಮುಂದಾದರೆ ನೌಕರರು ಬರ ನಿರ್ವಹಣೆ ಕೈಬಿಟ್ಟು ತಮ್ಮ ಇಷ್ಟದ ಹುದ್ದೆಗೆ ಹೋಗಲು ಲಾಬಿ ಆರಂಭಿಸುತ್ತಾರೆ. ಇದು ಪ್ರತಿಪಕ್ಷಗಳ ಟೀಕೆಗೆ ಗುರಿ ಆಗುವುದರ ಜತೆಗೆ ಸಾರ್ವಜನಿಕವಾಗಿಯೂ ಸರ್ಕಾರದ ಬಗ್ಗೆ ಕೆಟ್ಟ ಅಭಿಪ್ರಾಯ ಉಂಟು ಮಾಡುತ್ತದೆ.
ಎರಡನೆಯದಾಗಿ, ನೌಕರರ ವರ್ಗಾವಣೆ ಯಿಂದ ಬೊಕ್ಕಸದ ಮೇಲೆ ಬೀಳುವ ಹೊರೆ ತಪ್ಪಿಸುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ. ನೌಕರರು ವರ್ಗಾವಣೆ ಯಾದರೆ ಟಿಎ, ಡಿಎ ಹಾಗೂ ಮನೆ ಸ್ಥಳಾಂತರದ ವೆಚ್ಚವನ್ನು ಸರ್ಕಾರವೇ ಭರಿಸಬೇಕಾಗುತ್ತದೆ. ಎ ಮತ್ತು ಬಿ ದರ್ಜೆ ಅಧಿಕಾರಿಗಳಿಗೆ ಅವರ ಕುಟುಂಬ ಸದಸ್ಯರನ್ನು ಒಳಗೊಂಡಂತೆ ಮೊದಲ ದರ್ಜೆ ರೈಲ್ವೆ ಪ್ರಯಾಣ ವೆಚ್ಚ, ಸಿ ಮತ್ತು ಡಿ ದರ್ಜೆ ನೌಕರರಿಗೆ ಎರಡನೇ ದರ್ಜೆ ರೈಲ್ವೆ ಪ್ರಯಾಣ ವೆಚ್ಚವನ್ನು ಸರ್ಕಾರ ಕೊಡುತ್ತದೆ.
ಸಿದ್ಧವಾಗುತ್ತಿದ್ದ ಪಟ್ಟಿ: ವರ್ಗಾವಣೆ ಬಯಸುವ ನೌಕರರು ಈಗಾಗಲೇ ಶಾಸಕರ ಶಿಫಾರಸಿನೊಂದಿಗೆ ಸಂಬಂಧಪಟ್ಟ ಸಚಿವರ ಕಚೇರಿಗೆ ಅರ್ಜಿ ಕೊಟ್ಟಿದ್ದು, ಅಲ್ಲಿ ಪಟ್ಟಿ ಮಾಡುವ ಕಾರ್ಯವೂ ನಡೆದಿದೆ. ಮಾರ್ಗ ಸೂಚಿ ಪ್ರಕಟವಾದರೆ ತಕ್ಷಣ ಆದೇಶ ಹೊರಡಿಸಲು ಬಹುತೇಕ ಎಲ್ಲ ಸಚಿವರ ಕಚೇರಿಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ಥಳೀಯ ಬೇಡಿಕೆಗಳಿಗೆ ಬಗ್ಗುವ ಶಾಸಕರು ಸಹಜವಾಗಿಯೇ ಸಾರ್ವತ್ರಿಕ ವರ್ಗಾವಣೆ ಕೋರಿ ಸಿಎಂ ಮೇಲೆ ಒತ್ತಡ ಹೇರುವ ಸಾಧ್ಯತೆ ಹೆಚ್ಚಿವೆ.
ನೌಕರರ ಕೊರತೆ: ಸರ್ಕಾರಿ ನೌಕರರ ಕೊರತೆ ಬಹಳವಾಗಿ ಕಾಡುತ್ತಿದೆ. 6.50 ಲಕ್ಷ ಮಂಜೂರಾದ ಹುದ್ದೆಗಳಿವೆ. ಆ ಪೈಕಿ 2 ಲಕ್ಷ ಹುದ್ದೆಗಳು ಖಾಲಿ ಇವೆ.
ವರ್ಗಾವಣೆ ದಂಧೆ
ಸರ್ಕಾರಿ ನೌಕರರ ವರ್ಗಾವಣೆ ಕೆಲವರ ಪಾಲಿಗೆ ದಂಧೆಯಂತಾಗಿದೆ. ಕಳೆದ ವರ್ಷ ಎ ಮತ್ತು ಬಿ ದರ್ಜೆ ಅಧಿಕಾರಿಗಳಿಗೆ ಶೇ. 3ರಷ್ಟು ಹಾಗೂ ಸಿ ಮತ್ತು ಡಿ ದರ್ಜೆಗೆ ಶೇ. 4.5ರಷ್ಟು ವರ್ಗಾವಣೆ ಎಂದು ಮಾರ್ಗಸೂಚಿ ಸಿದ್ಧಪಡಿಸಲಾಗಿತ್ತು. ಆದರೆ ವರ್ಗಾವಣೆಯಾದ ಪ್ರಮಾಣ ಶೇ. 10 ಮೀರಿತ್ತು. ಮೇ ಅಂತ್ಯದೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದ್ದರೂ ಅಕ್ಟೋಬರ್ ತನಕವೂ ನಡೆದು ಟೀಕೆಗೆ ಗುರಿಯಾಗಿತ್ತು.
ಕಡತಗಳು ವಾಪಸ್
ಯಾವುದೇ ಸಂದರ್ಭದಲ್ಲಿ ವರ್ಗಾವಣೆ ಮಾಡುವ ಅಧಿಕಾರ ಮುಖ್ಯಮಂತ್ರಿಗಳಿಗೆ ಇದೆ. ಇದನ್ನು ಬಳಸಿಕೊಂಡು ಕೆಲ ಶಾಸಕರು ಮಾಡಿ ರುವ ಶಿಫಾರಸುಗಳನ್ನು ಮುಖ್ಯಮಂತ್ರಿ ಸಾರ್ವತ್ರಿಕ ವರ್ಗಾವಣೆಯ ಸಂದರ್ಭದಲ್ಲಿ ಮಂಡಿಸುವಂತೆ ಹೇಳಿ ಕಳುಹಿಸಿದ್ದಾರೆ. ಸಾರ್ವಜನಿಕ ಹಿತಕ್ಕೆ ಸಂಬಂಧಿಸಿದ ಪ್ರಕರಣ ಹೊರತುಪಡಿಸಿ ಯಾವುದೇ ಒತ್ತಡಕ್ಕೆ ಮಣಿದು ನೌಕರರ ವರ್ಗಾವಣೆ ಮಾಡುವುದು ಬೇಡವೆಂಬ ನಿರ್ಧಾರಕ್ಕೆ ಬರಲಾಗಿದೆ.